ಜಮೀನು ಖರೀದಿ ಮತ್ತು ಮನೆ ನಿರ್ಮಾಣಕ್ಕಾಗಿ ಇರುವ ಸರ್ಕಾರಿ ಯೋಜನೆಗಳ ಅಧ್ಯಯನ
ಜಮೀನು ಖರೀದಿ ಮತ್ತು ಮನೆ ನಿರ್ಮಾಣಕ್ಕೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರದ ವತಿಯಿಂದ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ವಿವಿಧ ರೀತಿಯ ಆರ್ಥಿಕ ಹಿನ್ನೆಲೆ ಇರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಸ್ಲಂತ ಮನೆ ಹೊಂದಬೇಕು ಮತ್ತು ಯಾರೂ ಈ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಆಶಯದಿಂದ ಅವುಗಳನ್ನು ಜಾರಿ ಮಾಡಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ), ರಾಜೀವ್ ಗಾಂಧಿ ಆವಾಸ್ ಯೋಜನೆ ಮತ್ತು ಡಿಡಿಎ ಮನೆ ನಿರ್ಮಾಣ ಯೋಜನೆ ಮೂಲಕ ಮನೆಗಳ ಕೊರತೆಗಳನ್ನು ನಿವಾರಿಸುವ ಮೂಲಕ ಸರ್ಕಾರದ ಯೋಜನೆಗೆ ಬೆಂಬಲ ನೀಡಲಾಗುತ್ತದೆ. ಅಗತ್ಯ ಇರುವವರಿಗೆ ಮನೆ ನಿರ್ಮಾಣಕ್ಕೆ ಸುಲಭವಾಗಿ ಜಮೀನು ಲಭ್ಯವಾಗುವಂತೆ ಮಾಡುವುದು, ಅದಕ್ಕೆ ಆರ್ಥಿಕ ನೆರವು, ಇದರ ಜತೆಗೆ ಕಡಿಮೆ ಬಡ್ಡಿದರದಲ್ಲಿ ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಜೀವನದಲ್ಲಿ ಒಂದು ಬಾರಿ ಮಾತ್ರ ನೀವು ಮನೆ ನಿರ್ಮಿಸುತ್ತೀರಿ. ಈ ಹಿನ್ನೆಲೆಯಲ್ಲಿ ನೀವು ಸರ್ಕಾರದ ಈ ಯೋಜನೆಗಳ ಲಾಭ ಪಡೆಯಬೇಕು. ಇಂಥ ಯೋಜನೆಗಳಿಂದ ನಿಮ್ಮ ಮನೆ ನಿರ್ಮಾಣದ ಯೋಜನೆಯ ಒಟ್ಟು ಮೊತ್ತದ ಒಂದು ಹೊರೆ ತಗ್ಗಿಸಲು ಸಾಧ್ಯವಿದೆ. ಅಗತ್ಯ ಇರುವ ಎಲ್ಲರಿಗೂ ಈ ಗೃಹ ನಿರ್ಮಾಣ ಯೋಜನೆಯ ಲಾಭಗಳು ಸಿಗುವ ರೀತಿಯಲ್ಲಿ ಅವುಗಳನ್ನು ಜಾರಿಗೊಳಿಸಲಾಗಿದೆ.
ಸರ್ಕಾರದ ಗೃಹ ನಿರ್ಮಾಣ ಯೋಜನೆಯ ಉದ್ದೇಶಗಳು
ಕಡಿಮೆ ವೆಚ್ಚದಲ್ಲಿ ಮನೆಗಳ ನಿರ್ಮಾಣ ಆಗಬೇಕು ಎನ್ನುವುದು ಉದ್ದೇಶ. ಅದಕ್ಕಾಗಿ ಬೇಕಾಗುವ ಜಮೀನು, ಮನೆ ನಿರ್ಮಾಣಕ್ಕಾಗಿ ಬೇಕಾಗುವ ಹಣಕಾಸಿನ ವೆಚ್ಚದ ಭಾರ ತಗ್ಗಿಸುವ ನಿಟ್ಟಿನಲ್ಲಿ ಸಹಾಯಧನದಿಂದ ಕೂಡಿದ ವಿವಿಧ ಸಾಲ ಯೋಜನೆಗಳು ಇವೆ. ವಿವಿಧ ಆರ್ಥಿಕ ಹಿನ್ನೆಲೆಯ ಜನರೆಲ್ಲರಿಗೂ ಸ್ವಂತ ಮನೆ ಇರಬೇಕು ಎಂಬ ಸರ್ಕಾರದ ಧ್ಯೇಯದ ಅನ್ವಯ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಮೊದಲ ಬಾರಿ ಮನೆ ನಿರ್ಮಿಸುವವರಿಗೆ ಕೈಗೆಟಕುವ ಗೃಹ ಯೋಜನೆ
ಕೈಗೆಟಕುವ ಗೃಹ ನಿರ್ಮಾಣ ಯೋಜನೆ ಮೊದಲ ಬಾರಿಗೆ ಮನೆ ಕಟ್ಟಿಸಿಕೊಳ್ಳುವವರಿಗೆ ನೆರವಾಗಲಿದೆ. ಮನೆಯೊಂದು ಇರಬೇಕು ಎಂದು ಹಂಬಲಿಸುವವರಿಗೆ ಈ ಯೋಜನೆ ಸಹಾಯಕವಾಗಲಿದೆ. ಅದಕ್ಕಾಗಿ ಸರ್ಕಾರ ಗೃಹ ಸಾಲದ ಬಡ್ಡಿ ಮೇಲೆ ರಿಯಾಯಿತಿ, ಮನೆ ನಿರ್ಮಾಣಕ್ಕಾಗಿ ಹಣಕಾಸಿನ ನೆರವು ನೀಡುತ್ತಿದೆ. ಮೊದಲ ಬಾರಿಗೆ ನೀವು ಗೃಹ ನಿರ್ಮಾಣಕ್ಕಾಗಿ ಜಮೀನು ಖರೀದಿಸುವುದಿದ್ದರೆ ಈ ಯೋಜನೆ ಅನುಕೂಲವಾಗಲಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)
ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು 2015ರಲ್ಲಿ ಜಾರಿಗೆ ತರಲಾಯಿತು. ಮನೆ ನಿರ್ಮಾಣಕ್ಕಾಗಿ ಜಮೀನು ಖರೀದಿ ಮಾಡಲು ಜನಪ್ರಿಯ ಯೋಜನೆ ಇದಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇರುವ ಕನಿಷ್ಠ ಆದಾಯ ಹೊಂದಿರುವ ಕುಟುಂಬಗಳು ಸ್ವಂತ ಮನೆ ಹೊಂದುವ ನಿಟ್ಟಿನಲ್ಲಿ ಜಮೀನು ಖರೀದಿಸಲು ಈ ಯೋಜನೆ ನೆರವಾಗಲಿದೆ. ಪ್ರತಿಯೊಬ್ಬ ನಾಗರಿಕನೂ ಸ್ವಂತ ಮನೆ ಹೊಂದಿ ಗೌರವಯುತ ಜೀವನ ನಡೆಸಲು ಈ ಯೋಜನೆ ನೆರವಾಗಲಿದೆ.