ತಮ್ಮ ತಂದೆಯ ಅಕಾಲಿಕ ಮರಣದ ಬಳಿಕ 1995 ರಲ್ಲಿ 28 ವರ್ಷ ವಯಸ್ಸಿನ ಶ್ರೀ ಬಿರ್ಲಾ ಅವರು ಸಮೂಹದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡರು. ಅಧ್ಯಕ್ಷರಾಗಿ, ಶ್ರೀ ಬಿರ್ಲಾ ಅವರು ಆದಿತ್ಯ ಬಿರ್ಲಾ ಸಮೂಹವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ 24 ವರ್ಷಗಳಲ್ಲಿ ಅವರು ಸಮೂಹದ ಚುಕ್ಕಾಣಿ ಹಿಡಿದು ಮುನ್ನಡೆಸಿದ್ದಾರೆ, ಬೆಳವಣಿಗೆಯನ್ನು ಹೆಚ್ಚಿಸಿದ್ದಾರೆ, ಯೋಗ್ಯತಾನುಸಾರ ಉದ್ಯೋಗಿಗಳ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ ಮತ್ತು ಪಾಲುದಾರರ ಮೌಲ್ಯವನ್ನು ಹೆಚ್ಚಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಅವರು, 1995 ರಲ್ಲಿ US$ 2 ಶತಕೋಟಿಯಷ್ಟು ಇದ್ದ ಸಮೂಹದ ವಹಿವಾಟಿನ ಪ್ರಮಾಣವನ್ನು ಇಂದು US$ 48.3 ಶತಕೋಟಿಗೆ ಏರಿಸಿದ್ದಾರೆ. ಸಮೂಹ ಕಾರ್ಯನಿರ್ವಹಿಸುವ ವಲಯಗಳಲ್ಲಿ ಜಾಗತಿಕ/ರಾಷ್ಟ್ರೀಯ ನಾಯಕನಾಗಿ ಹೊರಹೊಮ್ಮಲು ಶ್ರೀ ಬಿರ್ಲಾ ಅವರು ವ್ಯವಹಾರಗಳನ್ನು ಮರುಕ್ರಮಗೊಳಿಸಿದ್ದಾರೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಅವರು 20 ವರ್ಷಗಳಲ್ಲಿ 36 ಸಂಸ್ಥೆಗಳ ಖರೀದಿ ಮಾಡಿದ್ದು, ಇದು ಭಾರತೀಯ ಬಹುರಾಷ್ಟ್ರೀಯ ಕಂಪನಿ ಮಾಡಿದ ಅತ್ಯಧಿಕ ಸ್ವಾಧೀನವಾಗಿದೆ.
ಭಾರತೀಯ ಕಂಪನಿಯಿಂದ ಎರಡನೇ ಅತಿದೊಡ್ಡ ಖರೀದಿ ಎನಿಸಿಕೊಂಡಿರುವ, 2007 ರಲ್ಲಿನ ಜಾಗತಿಕ ಲೋಹ ಉದ್ಯಮದ ಪ್ರಮುಖ ಸಂಸ್ಥೆ ನಾವೆಲಿಸ್‌ನ ಖರೀದಿಯು, ಭಾರತೀಯ ಕಂಪನಿಗಳಿಗೆ ಹೊಸ ಗೌರವ ತಂದುಕೊಟ್ಟಿತು ಹಾಗೂ ದೇಶದಲ್ಲಿ ಹೆಚ್ಚಿನ ಮಟ್ಟದ ಆಸಕ್ತಿ ಮೂಡುವುದಕ್ಕೂ ಕಾರಣವಾಯಿತು. ವಿಶ್ವದ 3ನೇ ಅತಿದೊಡ್ಡ ಇಂಗಾಲದ ಪುಡಿ ಉತ್ಪಾದಕ ಎನಿಸಿಕೊಂಡಿರುವ ಅಮೆರಿಕ ಮೂಲದ ಕೊಲಂಬಿಯನ್ ಕೆಮಿಕಲ್ಸ್ ಕಂಪನಿಯ ಖರೀದಿಯಿಂದಾಗಿ, ತನ್ನ ಸ್ವಂತ ಇಂಗಾಲದ ಪುಡಿ ವಹಿವಾಟನ್ನು ಪರಿಗಣಿಸಿ, ಸಮೂಹ ಈಗ ಈ ವಲಯದಲ್ಲಿ ನಂ. 1 ಸ್ಥಾನದಲ್ಲಿದೆ. ಅದೇ ರೀತಿ ವಿಶೇಷ ತಿರುಳು ಉತ್ಪಾದಿಸುವ ಸ್ವೀಡನ್ ದೇಶದ ಪ್ರಮುಖ ಸಂಸ್ಥೆ ಡೊಮ್ಸ್‌ಜೊ ಫ್ಯಾಬ್ರಿಕರ್ ಖರೀದಿಯಿಂದಾಗಿ ಸಮೂಹದ ತಿರುಳು ಮತ್ತು ನಾರು ವ್ಯವಹಾರದಲ್ಲಿ ಸಮೂಹ ತನ್ನ ಜಾಗತಿಕ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಸಾಧ್ಯವಾಗಿದೆ. ಜರ್ಮನಿಯಲ್ಲಿನ ಪಾಲಿಮರ್‌ಗೆ ಸಂಬಂಧಿಸಿದ ರಾಸಾಯನಿಕಗಳು ಮತ್ತು ತಂತ್ರಜ್ಞಾನಗಳ ಸಂಸ್ಥೆ ಸಿಟಿಪಿ- ಜಿಎಂಬಿಎಚ್ ಖರೀದಿಯು ಇನ್ನೊಂದು ಮೈಲಿಗಲ್ಲಾಗಿದೆ.
ಇತ್ತೀಚೆಗೆ, ನಮ್ಮ ಸಮೂಹ ಸಂಸ್ಥೆಯಾದ ನಾವೆಲಿಸ್ ಮೂಲಕ ಶ್ರೀ ಬಿರ್ಲಾ ಅವರು, 2.6 ಶತಕೋಟಿ ಡಾಲರ್ ಮೊತ್ತಕ್ಕೆ ಅಮೆರಿಕದ ಪ್ರಮುಖ ಲೋಹ ಉದ್ಯಮ ಸಂಸ್ಥೆಯಾದ ಅಲೆರಿಸ್‌ಗೆ ಬಿಡ್ ಮಾಡಿದ್ದಾರೆ.
ಇವುಗಳಲ್ಲದೆ, ಕಳೆದ ಕೆಲವು ವರ್ಷಗಳಲ್ಲಿ ಶ್ರೀ ಬಿರ್ಲಾ ಅವರು ಕೆನಡಾ, ಚೀನಾ, ಇಂಡೊನೇಷ್ಯಾದಲ್ಲಿ ಉತ್ಪಾದನಾ ಘಟಕಗಳನ್ನು ಮತ್ತು ಆಸ್ಟ್ರೇಲಿಯಾದಲ್ಲಿ ಗಣಿಗಳನ್ನು ಖರೀದಿಸಿದ್ದಾರೆ, ಈಜಿಪ್ಟ್, ಥೈಲ್ಯಾಂಡ್ ಮತ್ತು ಚೀನಾದಲ್ಲಿ ಹೊಸ ಘಟಕಗಳನ್ನು ಸ್ಥಾಪನೆ ಮಾಡಿದ್ದಾರೆ. ಇದರ ಜೊತೆಗೆ, ಸಮೂಹದ ಎಲ್ಲ ಉತ್ಪಾದನಾ ಘಟಕಗಳಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸಿದ್ದಾರೆ.
ಭಾರತದಲ್ಲೂ ಕೂಡ ಅವರು ಪ್ರಮುಖ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಮಾಡಿದ್ದು, ಇವುಗಳಲ್ಲಿ (ಆಯ್ದ ಪಟ್ಟಿ ಮಾತ್ರ) ಜೇಪೀ ಸಿಮೆಂಟ್ ಘಟಕಗಳು, ಲಾರ್ಸೆನ್ ಮತ್ತು ಟುಬ್ರೋದ ವಿಭಾಗವಾದ ಬಿನಾನಿ ಸಿಮೆಂಟ್, ಅಲ್ಕನ್‌ನಿಂದ ಇಂಡಾಲ್, ಕೋಟ್ಸ್ ವಿಯೆಲ್ಲಾದಿಂದ ಮಧುರಾ ಗಾರ್ಮೆಂಟ್ಸ್, ಕನೊರಿಯಾ ಕೆಮಿಕಲ್ಸ್ ಮತ್ತು ಸೊಲಾರಿಸ್ ಕೆಮ್‌ಟೆಕ್ ಇಂಡಸ್ಟ್ರೀಸ್‌ನ ವಿಭಾಗವಾದ ಕ್ಲೋರ್ ಅಲ್ಕಲಿ ಸೇರಿವೆ.
ಶ್ರೀ ಬಿರ್ಲಾ ಅವರ ನೇತೃತ್ವದಲ್ಲಿ ನಡೆದ ಇತ್ತೀಚಿನ ವೊಡಾಫೋನ್ ಮತ್ತು ಐಡಿಯಾ ವಿಲೀನವು ಭಾರತದಲ್ಲಿ ಅತಿದೊಡ್ಡ ಮತ್ತು ಜಗತ್ತಿನ ಎರಡನೇ ಅತಿಡೊದ್ದ ಟೆಲಿಕಾಂ ಆಪರೇಟರ್ ಅನ್ನು ಸೃಷ್ಟಿಸಿದೆ.
ಅವರ ನೇತೃತ್ವದಲ್ಲಿ, ಆದಿತ್ಯ ಬಿರ್ಲಾ ಕಾರ್ಯನಿರ್ವಹಿಸುವ ಎಲ್ಲ ಪ್ರಮುಖ ವಲಯಗಳಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ, 42 ವಿವಿಧ ದೇಶಗಳಿಗೆ ಸೇರಿದ 120,000 ಅಸಾಧಾರಣ ಉದ್ಯೋಗಿಗಳಿಂದ ನಡೆಸಲ್ಪಡುವ ಅತ್ಯಂತ ಯಶಸ್ವಿ ಯೋಗ್ಯತಾನುಸಾರ ಸಿಬ್ಬಂದಿ ವ್ಯವಸ್ಥೆಯ ಸಂಸ್ಥೆಯನ್ನು ಶ್ರೀ ಬಿರ್ಲಾ ನಿರ್ಮಿಸಿದ್ದಾರೆ. ಎಒನ್ ಹೆವಿಟ್, ಫಾರ್ಚೂನ್ ಮ್ಯಾಗಜಿನ್ ಮತ್ತು ಆರ್‌ಬಿಎಲ್ (ಕಾರ್ಯತಂತ್ರದ ಎಚ್‌ಆರ್ ಮತ್ತು ನಾಯಕತ್ವ ಸಲಹಾ ಸಂಸ್ಥೆ) ನಡೆಸಿದ 2011 ರ 'ನಾಯಕರಿಗಾಗಿ ಅಗ್ರ ಸಂಸ್ಥೆಗಳು' ಅಧ್ಯಯನದಲ್ಲಿ ಆದಿತ್ಯ ಬಿರ್ಲಾ ಸಮೂಹ ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಮತ್ತು ಏಷ್ಯಾ ಪೆಸಿಫಿಕ್‌ನಲ್ಲಿ 1ನೇ ಸ್ಥಾನದಲ್ಲಿದೆ. ನೀಲ್‌ಸನ್ಸ್ ಅವರ 2014-15 ರ ಕಾರ್ಪೊರೇಟ್ ಇಮೇಜ್ ಮಾನಿಟರ್‌ನಲ್ಲಿ ಸಮೂಹ ಅಗ್ರಸ್ಥಾನ ಪಡೆದಿದೆ ಮತ್ತು ಸತತ ಮೂರನೇ ವರ್ಷ 'ಅತ್ಯುತ್ತಮ ದರ್ಜೆಯ' ನಂಬರ್ 1 ಕಾರ್ಪೊರೇಟ್ ಸಂಸ್ಥೆಯಾಗಿ ಹೊರಹೊಮ್ಮಿದೆ. 2018 ರಲ್ಲಿ ಎಒಎನ್-ಹೆವಿಟ್ ಅವರಿಂದ 'ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಉದ್ಯೋಗದಾತರು' ಎನ್ನುವ ಪ್ರತಿಷ್ಠಿತ ಮನ್ನಣೆಗೆ ಸಮೂಹ ಮತ್ತೊಮ್ಮೆ ಪಾತ್ರವಾಗಿದೆ.